ಪ್ರೆಲಾಗ್, ವ್ಲಾಡಿಮಿರ್
	1906. ರಸಾಯನವಿಜ್ಞಾನಿ. 1906 ಜುಲೈ 23ರಂದು ಯೂಗೊಸ್ಲಾವಿಯಾದಲ್ಲಿ ಜನನ. 1929ರಲ್ಲಿ ಪಿಎಚ್.ಡಿ ಪದವಿ ಪಡೆದು ಜೂರಿಕ್ಕಿನ ಸ್ವಿಸ್ ಫೆಡರಲ್ ವಿಶ್ವವಿದ್ಯಾಲಯದ ಆಗ್ರ್ಯಾನಿಕ್ ರಸಾಯನವಿಜ್ಞಾನ ವಿಭಾಗದ ಮುಖ್ಯಸ್ಥರಾದರು (1957). ಬ್ರಿಟಿಷ್ ರಾಯಲ್ ಸೊಸೈಟಿ, ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಷ್ಟ್ರೀಯ ವಿಜ್ಞಾನ ಅಕ್ಯಾಡೆಮಿ. ರಷ್ಯದ ವಿಜ್ಞಾನ ಅಕ್ಯಾಡೆಮಿ ಮುಂತಾದ ಹಲವು ವೈಜ್ಞಾನಿಕ ಸಂಸ್ಥೆಗಳ ಸದಸ್ಯ. ಇವರಿಗೆ 1945ರಲ್ಲಿ ವರ್ನರ್ ಪದಕ. 1962ರಲ್ಲಿ ಸ್ಟಾಸ್ ಮತ್ತು ರೈಸ್ ವಿಶ್ವವಿದ್ಯಾಲಯದ ವಿಶಿಷ್ಟ ಗೌರವ ಪದಕ. 1965ರಲ್ಲಿ ಮಾರ್ಸೆಲ್ ಬೆನೊ ಪ್ರಶಸ್ತಿ ದೊರೆತಿವೆ.

ಅಣುರಚನೆ ಏಕರೀತಿಯಾಗಿದ್ದು ಪರಮಾಣುಗಳ ಅಥವಾ ಪರಮಾಣು ಪುಂಜಗಳ ಮೂರು ಆಯಾಮಗಳ ಹಂಚಿಕೆಯಲ್ಲಿ ವ್ಯತ್ಯಾಸವಿದ್ದರೆ ಆ ವಿದ್ಯಮಾನಕ್ಕೆ ಸ್ಟೀರಿಯೊಐಸೊಮೆರಿಸಮ್ ಎಂದು ಹೆಸರು. ಇದರಲ್ಲಿ ದ್ಯುತಿಐಸೊಮೆರಿಸಮ್ ಎಂಬ ಒಂದು ಬಗೆಯುಂಟು. ಕೆಲವು ಸಂಯುಕ್ತ ಹರಳುಗಳ ಅಥವಾ ಅವುಗಳ ದ್ರಾವಣಗಳ ಮೂಲಕ ಸಮತಲ ಧ್ರುವೀಕೃತ (ಪ್ಲೇನ್ ಪೋಲರೈಸ್ಡ್) ಬೆಳಕನ್ನು ಹಾಯಿಸಿದಾಗ ಧ್ರುವೀಕರಣ ಸಮತಲ ಎಡಕ್ಕೊ ಬಲಕ್ಕೊ ತಿರುಗುವುದು. ಹೀಗೆ ಧ್ರುವೀಕರಣ ಸಮತಲವನ್ನು ತಿರುಗಿಸಬಲ್ಲ ಸಂಯುಕ್ತಕ್ಕೆ ದ್ಯುತಿಪಟುತ್ವ (ಅಪ್ಪಿಕಲ್ ಆ್ಯಕ್ಟಿವಿಟಿ) ಇದೆ ಎನ್ನುತ್ತೇವೆ. ಧ್ರುವೀಕರಣ ಸಮತಲವನ್ನು ಎಡಕ್ಕೆ ತಿರುಗಿಸುವ ಐಸೊಮರಿಗೆ ವಾಮಾವರ್ತಕ ಅಥವಾ ಎಡಮುರಿ (ಲೇವೊರೊಟೇಟರಿ) ಎಂದೂ ಬಲಕ್ಕೆ ತಿರುಗಿಸುವ ಐಸೊಮರಿಗೆ ದಕ್ಷಿಣಾವರ್ತಕ ಅಥವಾ ಬಲಮುರಿ (ಡೆಕ್ಸ್‍ಟ್ರೊರೊಟೇಟರಿ) ಎಂದು ಹೆಸರು. ಯಾವುದೇ ಸಂಯುಕ್ತ ದ್ಯುತಿಐಸೊಮೆರಿಸಮ್ಮನ್ನು ಪ್ರದರ್ಶಿಸಬೇಕಾದರೆ ಅದು ಅಸಮಾಂಗಕಾಯವಾಗಿರಬೇಕು. ಅಂದರೆ ಅದರ ಅಣು ಮತ್ತು ಅಣುವಿನ ಕನ್ನಡಿಯ ಪ್ರತಿಬಿಂಬ ಭಿನ್ನವಾಗಿರಬೇಕು. ಒಂದರ ಮೇಲೆ ಇನ್ನೊಂದನ್ನಿಟ್ಟರೆ ಹೊಂದಿಕೊಳ್ಳಬಾರದು. ಇಂಥ ಒಂದು ಜೊತೆ ಐಸೊಮರುಗಳಿಗೆ ದ್ಯುತಿ ಪ್ರತೀಪಕ್ಷಗಳು (ಅಪ್ಟಿಕಲ್ ಆಂಟಿಪೋಡ್ಸ್) ಎಂದು ಹೆಸರು.

ಜೈವಿಕ ಕಾಯಗಳಲ್ಲಿ ಇಂಥ ದ್ಯುತಿ ಪ್ರತೀಪಕ್ಷಗಳು ರೂಪುಗೊಳ್ಳಲು ತೆಗೆದುಕೊಳ್ಳುವ ಕಾಲಾವಧಿಯನ್ನು ಕರಾರುವಕ್ಕಾಗಿ ನಿರ್ಧರಿಸುವ ನಿಯಮಗಳನ್ನು ಪ್ರೆಲಾಗ್ ಮಂಡಿಸಿದ್ದಾರೆ. ನೈಸರ್ಗಿಕ ಉತ್ಪನ್ನಗಳಾದ ಪ್ರತಿಜೈವಿಕಗಳು (ಆ್ಯಂಟಿಬಯೊಟಿಕ್ಸ್), ಕಿಣ್ವಗಳು (ಎಂಜೈಮ್ಸ್), ಸ್ಟೆರಾಯ್ಡುಗಳು ಇತ್ಯಾದಿಗಳ ಅಣುರಚನೆಯನ್ನೂ ಸ್ಟೀರಿಯೊ ಐಸೊಮೆರಿಸಮ್ಮುಗಳನ್ನೂ ಕುರಿತು ಇವರು ಮತ್ತು ಆಸ್ಟ್ರೇಲಿಯ ಸಂಜಾತ ಕಾರ್ನ್‍ಫರ್ತ್ (ಇಂಗ್ಲೆಂಡಿನ ಸಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ) ನಡೆಸಿದ ಮೂಲಭೂತ ಸಂಶೋಧನೆ ಇವರುಗಳಿಗೆ 1975ನೆಯ ಸಾಲಿನ ರಸಾಯನವಿಜ್ಞಾನ ವಿಭಾಗದ ನೊಬೆಲ್ ಪಾರಿತೋಷಿಕವನ್ನು ತಂದು ಕೊಟ್ಟಿದೆ.
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ